ಭಾಜಾ
 ಪುರಾತನ ಬೌದ್ಧ ಧಾರ್ಮಿಕ ಕೇಂದ್ರ. ಭಾಜಾ, ಬೆಡ್‍ಸಾ, ಕಾರ್ಲೆ, ಕೊಂಡಾಣೆ ಚೈತ್ಯಗಳು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾದವು. ಭಾಜಾ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಮಾವಳಿ ತಾಲೂಕಿನಲ್ಲಿ ಪುಣೆ ಮುಂಬಯಿ ರೈಲ್ವೆ ಮಾರ್ಗದಲ್ಲಿ ಮಾಳವಳಿ ನಿಲ್ದಾಣದಿಂದ ಸುಮಾರು 5 ಕಿಮೀ ಅಂತರದಲ್ಲಿದೆ. ದಕ್ಷಿಣ ಭಾರತದಲ್ಲಿರುವ ಬೌದ್ಧಧಾರ್ಮಿಕ ಕೇಂದ್ರಗಳಲ್ಲಿ ಇದು ಅತ್ಯಂತ ಪುರಾತನವಾದ್ದು. ಇಲ್ಲಿಯ ಗುಹೆಗಳು, ಲೆಣಗಳು, ವಿಹಾರಗಳು ಮತ್ತು ಸ್ತೂಪಗಳು, ಬೌದ್ಧಧರ್ಮದ 'ಹೀನಯಾನ ಪಂಥಕ್ಕೆ ಸಂಬಂಧಪಟ್ಟವು. ಇಲ್ಲಿಯ ಉತ್ಖನನದಲ್ಲಿ 29 ನಿವೇಶನಗಳು ಬೆಳಕಿಗೆ ಬಂದಿವೆ.

ಭಾಜಾ ನಿವೇಶನದಲ್ಲಿ ದೊರೆತ ಶಾಸನಗಳು ಈ ಕ್ಷೇತ್ರದ ಹಿರಿಮೆಯನ್ನು ಗುರುತಿಸಿಕೊಡುತ್ತವೆಯಲ್ಲದೆ ಆಯಾ ಕಾಲ ಖಂಡಗಳನ್ನು ಗುರುತಿಸುವಲ್ಲಿ ತುಂಬಾ ಸಹಾಯಕವಾಗಿವೆ. ಕೂಡ. ಲಿಪಿಶಾಸ್ತ್ರದ ಆಧಾರಗಳಿಂದ ಇವುಗಳ ಕಾಲವನ್ನು ವಿದ್ವಾಂಸರು ಕ್ರಿ.ಪೂ.ಸು. 175ರಿಂದ ಕ್ರಿ.ಶ.ಸು. 2ನೆಯ ಶತಮಾನವೆಂದು (ಅಂದರೆ ಗೌತಮಿಪುತ್ರ ಸಾತಕರ್ಣಿಯ ಕಾಲದತನಕ) ಗುರುತಿಸಿದ್ದಾರೆ.

ಇಲ್ಲಿಯ ಗುಹೆಗಳಲ್ಲಿ ಹನ್ನೆರಡು ಶಾಸನಗಳು ಬೆಳಕಿಗೆ ಬಂದಿವೆ. ಈ ಶಾಸನಗಳಲ್ಲಿ ನೀರಿನದೋಣಿ, ಮುಂತಾದವನ್ನು ಕಟ್ಟಿಸಿ ದಾನ ಮಾಡಿದ ವಿಷಯಗಳು ತಿಳಿದುಬರುತ್ತವೆ. ಒಂದು ಗುಹೆಯಲ್ಲಿ ಕೆಲವು ಸ್ತೂಪಗಳಿರುವುದು ಕಂಡು ಬಂದಿದೆ. ಭಾಷಾ ದೃಷ್ಟಿಯಿಂದ ಇಲ್ಲಿಯ ಶಾಸನಗಳೂ ಸಂಸ್ಕøತದಿಂದ ಹೆಚ್ಚು ಪ್ರಭಾವಿತವಾಗಿವೆಯೆಂದು ಹೇಳಬಹುದು.

ಭಾಜಾದಲ್ಲಿ ಚೈತ್ಯ ಗೃಹಗಳು ಲೇಣಗಳು, ಮಂಟಪಗಳು, ಪಾಣೀಯ ಪೊಢಿಗಳು (ನೀರಿನ ದೋಣಿಗಳು), ಧ್ಯಾನಗೃಹಗಳು ಮತ್ತು ಸ್ತೂಪಗಳು ಇವೆ. ಇಲ್ಲಿಯ ಗುಹೆಗಳಲ್ಲಿ 6ನೆಯ ಗುಹೆ ಒಂದು ಲೇಣವಾಗಿದ್ದು ಅದನ್ನು ಯಾವೊಂದು ಯೋಜನೆ ಹಾಕಿಕೊಳ್ಳದೆ ಬಿಡಿಸಿದಹಾಗೆ ಕಂಡುಬರುತ್ತದೆ. ಈ ಚೌಕೋನಾಕೃತಿಯ ಪಡಸಾಲೆಯ ಎಡಬಲಪಕ್ಕಗಳಲ್ಲಿ ಎರಡೆರಡು ಮತ್ತು ಮಧ್ಯದಲ್ಲಿ ಮೂರು ಗೂಡುಗಳಿವೆ. ಇವುಗಳಿಗೆ ಬಾಗಿಲುಗಳಿವೆ. ಇವನ್ನು ಗೋಡೆಗಿಂತ ಸ್ವಲ್ಪ ಮುಂದಕ್ಕೆ ಚಾಚಿ ಹಾಗೂ ಒಳಭಾಗದಲ್ಲಿ ಸ್ವಲ್ಪ ಇಳಿಜಾರಾಗಿ ಕೆತ್ತಲಾಗಿದೆ. ಚೌಕಟ್ಟಿನ ಕಂಡರಣೆ ಚೆನ್ನಾಗಿದೆ. ಒಳಗೆ ಚಾವಣಿ ಸಪಾಟವಾಗಿದ್ದು ಪ್ರತಿಯೊಂದು ಗೂಡಿನಲ್ಲೂ ಒಂದು ಉದ್ದನೆಯ ಪೀಠವಿದೆ. ಬಾಗಿಲ್ವಾಡದಲ್ಲಿ ಮರದ ಬಾಗಿಲುಗಳನ್ನು ಕೂಡಿಸಲು ಮಾಡಿದ ಗುಸಿಯ ಗುಳಿಗಳಿವೆ. ಗುಹೆಯ ಮುಂಭಾಗ ಹಾಳಾಗಿದ್ದು ಬೋಳುಬೋಳಾಗಿದೆ. ಈ ಗುಹೆ ಅಜಂತಾದ ಗುಹೆಗೆ ಹತ್ತಿರದ್ದಾಗಿದೆಯೆಂದು ತೋರುತ್ತದೆ. ಬಾಧಾಯೆಂಬವಳು ಕೊರೆಸಿ ದಾನಮಾಡಿದುದಾಗಿ ಇಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. 12ನೆಯ ಗುಹೆ ಭಾಜಾದಲ್ಲಿಯೇ ಅತ್ಯಂತ ಪ್ರಸಿದ್ಧವಾದ ಚೈತ್ಯ ಗೃಹ. ಇದು ವಾಸ್ತುಶಿಲ್ಪದ ಆಧ್ಯಯನ ದೃಷ್ಟಿಯಿಂದ ವಿಶಿಷ್ಟವಾದದ್ದು. ಈ ಚೈತ್ಯ ಗೃಹ ಆಯತಾಕಾರದಲ್ಲಿದೆ. ಮುಂಭಾಗ ಬಹಳ ಸುಂದರವಾಗಿದೆ. ಗುಹೆಯ ಮಧ್ಯದಲ್ಲಿ ವೃತ್ತಾಕಾರದ ಸ್ತೂಪವೊಂದಿದೆ. ಇದರಲ್ಲಿ ಅರ್ಧಗೋಲಾಕಾರದ ಗುಮ್ಮಟದ ಮೇಲೆ ಚೌಕಾಕಾರದ ಹರ್ಮಿಕೆಯಿದೆ. ಗೋಡೆ ಸಹ ಸ್ತೂಪದ ಮೇಲೆ ಗೋಲಾಕಾರ ಆಕೃತಿಯನ್ನು ತಾಳಿನಿಂತಿದೆಯೇನೋ ಎಂಬ ಭಾವನೆಯನ್ನು ಸೃಜಿಸುತ್ತದೆ. ಕಂಬಗಳ ಶಿರೋಭಾಗದಲ್ಲಿ ಆರಂಭವಾಗಿ ಚಾವಣಿಯಲ್ಲಿ ಬೆಳೆದು ಮಧ್ಯ ಬಿಂದುವಿನಲ್ಲಿ ಮೇಲ್ಪಟ್ಟಿಕೆಗಳು ಒಂದನ್ನೊಂದು ಸಂಧಿಸಿವೆ. ಈ ಚೈತ್ಯ ಅಜಂತಾ ಮತ್ತು ಬೆಡ್‍ಸಾದಲ್ಲಿಯ ಗುಹೆಗಳನ್ನು ಹೋಲುತ್ತದೆ. ಇದರ ಮುಂಭಾಗ ಅದರಲ್ಲೂ ಮೇಲ್ಭಾಗ ಕಲಾಕೃತಿಯ ಸೌಂದರ್ಯದ ಒಂದು ಪ್ರಭಾವಿ ಭಾಗವಾಗಿದೆ. ಇಲ್ಲಿಯ ಕಮಾನು ವಿಸ್ತಾರವಾಗಿದ್ದು ಎಡಬಲದಲ್ಲಿ ವೇದಿಕೆಗಳನ್ನು ಪಟ್ಟಿಕೆಗಳನ್ನೂ ಮಿಥುನಗಳನ್ನು ಬಿಡಿಸಿವೆ. ವೇದಿಕೆಯ ಕೆಳಗಡೆ ಯಕ್ಷಿಯ ಮೂರ್ತಿಯನ್ನು ಕೆತ್ತಿದೆ. ಅದರ ಕೆಳಗಡೆ ಒಂದು ಶಾಸನವಿದೆ. ಕಮಾನಿನ ಬಲಪಕ್ಕದಲ್ಲಿ ಜಾಳಂದ್ರವಿದೆ. ಅಜಂತಾದ ಗುಹೆಯನ್ನು ಹೋಲುವ ಇದನ್ನು ಕುರಿತು ಫಗ್ರ್ಯೂಸನ್ ಮತ್ತು ಬರ್ಜೆಸ್ ಅವರು ತಮ್ಮ 'ದಿ ಕೇವ್ ಟೆಂಪಲ್ಸ್ ಆಫ್ ಇಂಡಿಯಾ (ಇಂಡಿಯದ ಗುಹಾದೇವಾಲಯಗಳು) ಗ್ರಂಥದಲ್ಲಿ 'ಇವನ್ನು ನೋಡಿದ ಮೇಲೆ ಭಾರತದಲ್ಲಿ ಶಿಲಾವಾಸ್ತುವಿನ ಶಿಲ್ಪವಿನ್ಯಾಸ ಕರಕೌಶಲ ಗರಿಮೆಯ ತುತ್ತತುದಿಯನ್ನು ಮುಟ್ಟಿಲ್ಲವೆಂದು ಹೇಳುವುದು ಯಾರಿಗೂ ಅಸಾಧ್ಯದ ಮಾತು. ಇದು ಮರದಲ್ಲಿ ನಾಜೂಕಿನ ಕೆಲಸ ಮಾಡುವ ಬಡಗಿಗಳೇ ಈ ಶಿಲಾಸೌಧವನ್ನು ಕೆತ್ತಿ ನಿರ್ಮಿಸಿದರೋ ಎಂಬಂತಿದೆ. ಇಷ್ಟೇ ವ್ಯಾತ್ಯಾಸ-ಕಟ್ಟಿಗೆಯಲ್ಲಿ ಮಾಡುವ ಕೆಲಸವನ್ನು ಬಹಳಕಾಲ ಬಾಳುವ ವಸ್ತುವಿನಲ್ಲಿ (ಕಲ್ಲಿನಲ್ಲಿ) ಕಂಡರಿಸಿದ್ದಾರೆ ಎಂದು ಹೇಳಿದ್ದಾರೆ.

ಭಾಜಾದಲ್ಲಿಯ ಮತ್ತೊಂದು ಗುಹೆಯಲ್ಲಿ 14 ಸ್ತೂಪಗಳಿವೆ. ಭಿನ್ನ ಭಿನ್ನ ಅಳತೆಯ ಇವನ್ನು ವಿವಿಧ ಕಾಲದಲ್ಲಿ ಕಟ್ಟಲಾಗಿದೆ. ಗೋಲಾಕಾರದಲ್ಲಿರುವ ಈ ಸ್ತೂಪಗಳಲ್ಲಿ ಕೆಲವು ಸಾದಾ ರೂಪದಲ್ಲಿದ್ದರೆ ಕೆಲವು ವೇದಿಕಾ ಚಿತ್ರಗಳನ್ನು ಹೊಂದಿವೆ. ಇವು ಹಲವು ಭದಂತರ ಸ್ಮಾರಕಗಳು. ಇಲ್ಲಿಯ ವೃತ್ತಕಾರದ ಗುಹೆಯೊಂದನ್ನು ಲೇಣಕ್ಕಾಗಿ ಬಳಸಿರುವುದು ಅಪೂರ್ವ ಸಂಗತಿ. ಪಶ್ಚಿಮ ಭಾರತದಲ್ಲಿ ಈ ಬಗೆಯ ಗುಹೆ ಇನ್ನೊಂದಿಲ್ಲ.

ಒಟ್ಟಾರೆ ಈ ಗುಹೆಗಳ ಸ್ಥಾನಮಾನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆರಂಭದಲ್ಲಿ ಬೌದ್ಧಭಿಕ್ಷುಗಳು ಇಲ್ಲಿಗೆ ಬಂದು ಗುಡಿಸಲು ಮತ್ತು ನಿಸರ್ಗನಿರ್ಮಿತ ಗುಹೆಯಲ್ಲಿ ವಾಸವಾಗಿರಬಹುದು. ಅನಂತರ ತಮಗೆ ಬೇಕಾದ ಹಾಗೆ ವಾಸ್ತುಗಳನ್ನು ಕೊರೆಯಿಸಿರಬಹುದು ಬೇಡ್‍ಸಾ ಮತ್ತು ಕಾರ್ಲೆ ಇವೂ ಇಲ್ಲಿಗೆ ಹತ್ತಿರದ ಸ್ಥಳಗಳೇ ಆಗಿದ್ದು ಅವೆಲ್ಲಕ್ಕೂ ಪೂರ್ವದಲ್ಲಿ ಭಾಜಾ ಕೇಂದ್ರವಾಗಿತ್ತೆಂದು ತೋರುತ್ತದೆ. 		
 (ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ